ಮಮ್ಮಿ
ಸುಗಂಧ ದ್ರವ್ಯಗಳನ್ನು ಹಾಕಿ ಸಾವಿರಾರು ವರ್ಷಪರ್ಯಂತ ಕೆಡದಂತೆ ಇಡಲಾಗುವ ಶವ. ಅರ್ಯಾಬಿಕ್ ಮೂಲದ ಈ ಶಬ್ದ ಬಿಟ್ಯೊಮೆನ್ ಎಂಬ ಖನಿಜವನ್ನು ಸೂಚಿಸುತ್ತದೆ. ಪ್ರಾಚೀನ ಈಜಿಪ್ಟಿನ ಶವಸಂರಕ್ಷಣಾ ವಿಧಾನದಲ್ಲಿ ಈ ಖನಿಜವನ್ನು ಸಂರಕ್ಷವಾಗಿ ಬಳಸಲಾಗುತ್ತಿತ್ತೆಂಬ ತಪ್ಪು ಕಲ್ಪನೆಯೇ ಈ ಹೆಸರು ಬರಲು ಕಾರಣವೆನ್ನಲಾಗಿದೆ.

ಲೋಕೋತ್ತರ ಜೀವನದಲ್ಲಿ ನಂಬಿಕೆ ತಳೆದ ಪ್ರಾಚೀನ ಈಜಿಪ್ಟಿಯನ್ನರು ಬದುಕಿದ್ದಾಗ ಇದ್ದಂತೆಯೇ ಮೃತದೇಹಗಳನ್ನು ಇಡಬೇಕೆಂದು ಭಾವಿಸಿ ಶವ ಸಂರಕ್ಷಣೆಯ ವಿಧಾನಗಳ ಪರಿಷ್ಕರಣೆಯಲ್ಲಿ ತೊಡಗಿದರು. ಸಾವಿರಾರು ವರ್ಷಗಳ ತರುವಾಯ ಪುರಾತತ್ವ ಶಾಸ್ತ್ರಜ್ಞರಿಗೆ ಹೀಗೆ ಸಂರಕ್ಷಿತವಾದ ದೇಹಗಳು ಕಂಡುಬಂದವು. ಇಂದು ಹಲವಾರು ವಸ್ತುಸಂಗ್ರಹಾಲಯಗಳಲ್ಲಿ ಮಮ್ಮಿಗಳಿವೆ. ಈಜಿಪ್ಟಿನ ಫ್ಯಾರೋಗಳಾದ ಎರಡನೆಯ ರಾಮ್ಸೆಸ್ ಹಾಗೂ ಟುಟನ್‍ಖಾಮೆನ್ನರ ಮಮ್ಮಿಗಳು ಪ್ರಸಿದ್ದವಾದವು.
ಮೇಲಣ ಈಜಿಪ್ಟಿನಲ್ಲಿ ರಾಜವಂಶ ಪೂರ್ವಕಾಲದಲ್ಲಿ (ಪ್ರೀಡೈನಾಸ್ಟಿಕ್) ಮೃತರನ್ನು ಮರಳನ್ನು ತೋಡಿ ಮಾಡಿದ ಗುಂಡಿಯಲ್ಲಿ ಹೂಳುತ್ತಿದ್ದರು. ಅಲ್ಲಿಯ ಶುಷ್ಕ ಹಾಗೂ ಉಷ್ಣ ಹವೆಯಿಂದಾಗಿ ಹೂಳಿದ ದೇಹ ಸಹಜವಾಗಿ ಒಣಗಿ ರಕ್ಷಿತವಾಗುತ್ತಿತ್ತು. ಇದು ಈಜಿಪ್ಟಿನ ಜನರ ನಂಬಿಕೆಯಲ್ಲಿ ಪ್ರಧಾನ ಪಾತ್ರವಹಿಸಿದಂತೆ ತೋರುತ್ತದೆ.
ಈಜಿಪ್ಟಿಯನ್ನರು ಶವಸಂರಕ್ಷಣೆಗೆ ಬಳಸಿದ ಸಾಮಾಗ್ರಿ ಹಾಗೂ ಅನುಸರಿದ ವಿಧಾನಗಳನ್ನು ಈಗ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ತುಂಬ ಸರಳರೀತಿಯಲ್ಲಿ ಆರಂಭದ ಶವಸಂರಕ್ಷಣಾ ವಿಧಾನ ಬರಬರುತ್ತ ವಿಸ್ತøತವಾಗಿ ತುಂಬ ವೆಚ್ಚದ ಚಿಕಿತ್ಸೆಯಾಯಿತು. ಸಿರಿವಂತರ ದೇಹಗಳಿಗಷ್ಟೇ ಇದು ಸೀಮಿತಗೊಂಡಿತು. ಈ ಚಿಕಿತ್ಸೆ ಪೂರ್ಣಗೊಳ್ಳಲು ಎಪ್ಪತ್ತು ದಿನಗಳು ಹಿಡಿಯುತ್ತಿದ್ದುವೆಂದು ಪ್ರಾಚೀನ ಗ್ರಂಥಗಳು ತಿಳಿಸುತ್ತವೆ.

ಶವಸಂರಕ್ಷಣೆಯ ಪ್ರಕ್ರಿಯೆ ಇದು: ಲೋಹದ ಉಪಕರಣವೊಂದನ್ನು ಮೂಗಿನ ಹೊಳ್ಳೆಗಳ ಮೂಲಕ ತೂರಿಸಿ ಮಿದುಳಿನ ಭಾಗವನ್ನು ಹೊರತೆಗೆದು, ಖಾಲಿಯಾದ ಜಾಗಕ್ಕೆ ನೀರು ಹರಿಸಿ ಸ್ವಚ್ಚಗೊಳಿಸಲಾಗುತ್ತಿತ್ತು. ತರುವಾಯ ಹೃದಯ ಹಾಗೂ ಮೂತ್ರಕೋಶಗಳನ್ನು ಬಿಟ್ಟು ಉಳಿದೆಲ್ಲ ಒಳ ಭಾಗಗಳನ್ನು ಹೊರತೆಗೆಯಲಾಗುತ್ತಿತ್ತು. ಖಾಲಿ ಹೊಟ್ಟೆಯೊಳಗೆ ನಾರಿನ ಮೆತ್ತೆಗಳನ್ನು ಅಥವಾ ಮರದ ಪುಡಿಯನ್ನು ತುಂಬಲಾಗುತ್ತಿತ್ತು. ಆನಂತರ ದೇಹದಲ್ಲಿಯ ತೇವಾಂಶ ಹೋಗಿ ಜೀವಕೋಶಗಳು ಒಣಗುವ ತನಕ ದೇಹವನ್ನು ರಾಳವನ್ನು ಬಳಿದು, ಮೊಗವಾಡವನ್ನು ಹಾಕಲಾಗುತ್ತಿತ್ತು. ಎಚ್ಚರಿಕೆಯಿಂದ ದೇಹವನ್ನು ನಾರಿನ ಪಟ್ಟಿಗಳಿಂದ ಹಲವು ಪದರಗಳಲ್ಲಿ ಸುತ್ತಿ ಶವ ಪಟ್ಟಿಯಲ್ಲಿ ಇರಿಸಲಾಗುತ್ತಿತ್ತು. ಒಂದರೊಳಗೊಂಡಂತೆ ಹಲವು ಶವಪಟ್ಟಿಗೆಗಳಿರುತ್ತಿದ್ದುದುಂಟು. ಇವು ಮರದ ಅಥವಾ ಕಲ್ಲಿನವಾಗಿರುತ್ತಿದ್ದು. ಆಯಾಕಾರದವು ಇಲ್ಲವೇ ಶವದಾಕಾರಕ್ಕೆ ತಕ್ಕಂತೆ ಸಿದ್ಧಪಡಿಸಿದವು ಆಸಿರುತ್ತಿದ್ದವು. ಈ ಪೆಟ್ಟಿಗೆಗಳನ್ನು ಅನೇಕ ದಿನ ಬಳಕೆಯ ವಸ್ತುಗಳೊಂದಿಗೆ ಸಮಾಧಿ ಮಾಡಲಾಗುತ್ತಿತ್ತು.
ಪ್ರಾಚೀನ ಈಜಿಪ್ಟಿನ ಜನ ಪ್ರಾಣಿದೇಹಗಳನ್ನು ಕೂಡ ಸಂಸ್ಕರಣೆ ಮಾಡಿ ರಕ್ಷಿಸಿದ ನಿದರ್ಶನಗಳುಂಟು. ಪವಿತ್ರವೆಂದು ಪರಿಗಣಿಸಲಾದ ಪ್ರಾಣಿಗಳ ದೊಡ್ಡ ಸಮಾಧಿ ಸ್ಥಳಗಳು (ಹೆಚ್ಚಿನವು ರೋಮನ್ ಕಾಲದವು) ಕಂಡುಬಂದಿವೆ. ಪೆರು, ಮೆಕ್ಸಿಕೋ ಮತ್ತು ಈಜಿಪ್ಟಿನಲ್ಲಿಯ ಹವೆಯಿಂದಾಗಿ ಸ್ವಾಭಾವಿಕವಾಗಿ ಸಂರಕ್ಷಿತವಾದ ದೇಹಗಳನ್ನೂ ಮಮ್ಮಿಗಳೆಂದೇ ಕರೆಯುವುದುಂಟು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ